ಅನೇಕರು ಬದರೀ ಯಾತ್ರೆಯನ್ನು ಮೊದಲಬಾರಿ ಕೈಗೊಂಡಿದ್ದೀರಿ. ಏನು ತರಬೇಕು ಏನು ತರುವುದು ಬೇಡ ಎನ್ನುವ ವಿಷಯದಲ್ಲಿ ಕೆಲವು ಸಂದೇಹಗಳಿರುತ್ತವೆ. ಈ ಕೆಳಗಿನ ಲೇಖನವು ನಿಮ್ಮ ಸಂದೇಹಗಳನ್ನು ಪರಿಹರಿಸುವ ಯತ್ನವನ್ನು ಮಾಡುತ್ತದೆ. ಇದನ್ನು ಅನುಸರಿಸಿ ನಿಮ್ಮ ಯಾತ್ರೆಯನ್ನು ಸುಗಮಗೊಳಿಸಿಕೊಳ್ಳಬಹುದು.
ಕಡ್ಡಾಯವಾಗಿ ತರಬೇಕಾದದ್ದು
- ನಿಮ್ಮ ಆಧಾರ್ ಕಾರ್ಡಿನ, ಪೂರ್ತಿಗಾತ್ರದ ಮೂರು ಅಥವಾ ನಾಲ್ಕು ಪ್ರತಿಗಳು.
- ಊಟದ ತಟ್ಟೆ ಮತ್ತು ನೀರು ಕುಡಿಯುವ ಲೋಟ.
- ಬಿಸಿ ನೀರಿಗಾಗಿ ಒಂದು ಥರ್ಮಾಸ್ ಫ್ಲಾಸ್ಕ್
- ಒಂದು ಕೈಚೀಲ (ಒಂದು ಜೊತೆ ಬಟ್ಟೆ + ಊಟದ ತಟ್ಟೆ ಇಷ್ಟನ್ನೇ ಇಟ್ಟುಕೊಳ್ಳುವ ಗಾತ್ರದ್ದು) (ಚಿತ್ರವನ್ನು ನೋಡಿರಿ)
- ಕೈಪೂರ್ತಿ ಮುಚ್ಚಿಕೊಳ್ಳುವಂತಹ ಥರ್ಮಲ್ ಉಡುಪು ಅಥವಾ ಸ್ವೆಟರು, ಉಲನ್ ಸಾಕ್ಸ್, (ಚಿತ್ರವನ್ನು ನೋಡಿರಿ)
- ಕೈಗವಸುಗಳು ಹಾಗೂ ಮಂಕೀ ಟೋಪಿ
- ನಿಮ್ಮ ಅತ್ಯಗತ್ಯವಾದ ಔಷಧಿಗಳು
ಕಡ್ದಾಯವಲ್ಲದ, ಆದರೆ ಬಹಳ ಉಪಯುಕ್ತವಾಗುವ ವಸ್ತುಗಳು
- 15 ಮೀಟರು ಉದ್ದದ ಒಂದು ನೈಲಾನ್ ಹಗ್ಗ (ಬಟ್ಟೆ ಒಣಗಿಸಿಕೊಳ್ಳಲು) (ಚಿತ್ರವನ್ನು ನೋಡಿರಿ)
- 20-25 ಸೇಫ್ಟಿ ಪಿನ್ನುಗಳು (ಬಟ್ಟೆಗಳನ್ನು ಒಣಗಿಸುವಾಗ ಭದ್ರಪಡಿಸಲು) (ಚಿತ್ರವನ್ನು ನೋಡಿರಿ)
15 ದಿನಗಳ ಯಾತ್ರೆ ಎಂದ ಮಾತ್ರಕ್ಕೆ ಹದಿನೈದೂ ದಿನಗಳ ಬಟ್ಟೆಗಳನ್ನು ತರುವ ಅವಶ್ಯಕತೆಯು ಇಲ್ಲ. 8 ದಿನಗಳ ಬಟ್ಟೆಯನ್ನು ತಂದರೆ ಸಾಕು. ಯಾಕೆಂದರೆ ನಮ್ಮ ಯಾತ್ರೆಯಲ್ಲಿ ಹಲವಾರು ಕಡೆ ನಿಮ್ಮ ಬಟ್ಟೆಗಳನ್ನು ಒಗೆದು ಒಣಗಿಸಿಕೊಳ್ಳಲು ಅವಕಾಶವು ಸಿಗುತ್ತದೆ. ಇಂತಹ ಸಂದರ್ಭಗಳಲ್ಲಿ ನೀವು ನಿಮ್ಮ ಒದ್ದೆ ಬಟ್ಟೆಗಳನ್ನು ಈ ನೈಲಾನ್ ಹಗ್ಗದ ಸಹಾಯದಿಂದ ಒಣಗಿಸಿಕೊಳ್ಳಬಹುದು. ಸೇಫ್ಟಿ ಪಿನ್ನುಗಳನ್ನು ಬಳಸಿ ಈ ಒಣಗಿಸಲು ಹಾಕಿದ ಬಟ್ಟೆಗಳನ್ನು ಭದ್ರಪಡಿಸಬಹುದು. ಬಟ್ಟೆ ಕ್ಲಿಪ್ಪುಗಳಾದರೆ ಬ್ಯಾಗಿನಲ್ಲಿ ಹೆಚ್ಚಿನ ಸ್ಥಳವನ್ನು ಬೇಡುತ್ತವೆ. ಸೇಫ್ಟಿಪಿನ್ನುಗಳಾದರೆ ಹೆಚ್ಚಿನ ಜಾಗವನ್ನೂ ಬೇಡುವುದಿಲ್ಲ. ಸಾಗಿಸಲೂ ಸುಲಭ. 15 ದಿನಗಳ ಬಟ್ಟೆಯ ಲಗೇಜು ನಿಮಗೆ ಖಂಡಿತವಾಗಿಯೂ ಹೊರೆಯಾಗುತ್ತದೆ.
ಶ್ರಾದ್ಧವನ್ನು ಮಾಡುವವರು ತರಬೇಕಿರುವ ವಸ್ತುಗಳು
- ಸಂಧ್ಯಾವಂದನೆಯ ಪಾತ್ರೆಗಳು
- ಒಂದು ಚಿಕ್ಕ ಗಾತ್ರದ ತಾಮ್ರ ಅಥವಾ ಹಿತ್ತಾಳೆಯ ತಟ್ಟೆ
- ಪಿತೃಗಳ ಹೆಸರಿನ ಪಟ್ಟಿ
- ಒಂದು ರೂಪಾಯಿಯ 50 – 75 ನಾಣ್ಯಗಳು
ತರಬಾರದ ವಸ್ತುಗಳು
- ಆಭರಣಗಳು
- ದುಬಾರಿವಸ್ತುಗಳು
- ಅನಗತ್ಯ ನಗದು
- ಹಾಸಿಗೆ, ಹೊದಿಕೆ, ಚಾಪೆ
- ಎಳ್ಳು, ಗೋಪೀಚಂದನ, ಜನಿವಾರ
ಬೆಚ್ಚಗಿನ ಬಟ್ಟೆಗಳ ವಿಷಯದಲ್ಲಿ ನಮ್ಮ ಅಭಿಪ್ರಾಯ : ಬೇಸಿಗೆ ಕಾಲದ ಬದರೀ ಯಾತ್ರೆಯ ಸಂದರ್ಭದಲ್ಲಿ ಬದರಿಯೊಂದನ್ನು ಬಿಟ್ಟು ಬೇರೆಲ್ಲ ಸ್ಥಳಗಳಲ್ಲಿ ಸಾಕಷ್ಟು ಬಿಸಿಲು ಇರುತ್ತದೆ. ಅರ್ಥಾತ್ ನಿಮಗೆ ಈ ಸ್ವೆಟರು ಸಾಕ್ಸು ಇತ್ಯಾದಿಗಳು ಪ್ರಯೋಜನವಾಗುವುದು ಕೇವಲ 3 ರಾತ್ರಿಗಳಿಗೆ ಮಾತ್ರ. ಉಳಿದೆಲ್ಲ ದಿನಗಳಲ್ಲಿ ಇವುಗಳೇ ಒಂದು ಹೊರೆ ಆಗಿ ಹೋಗುತ್ತವೆ. ಸ್ವೆಟರು ಹಗುರ ಇರಬಹುದು ಆದರೆ ನಿಮ್ಮ ಬ್ಯಾಗಿನಲ್ಲಿ ಹೆಚ್ಚಿನ ಸ್ಥಳವನ್ನು ಆಕ್ರಮಿಸಿಕೊಳ್ಳುತ್ತದೆ. ಹೀಗಾಗಿ ನೀವು ಅನಗತ್ಯ ಲಗ್ಗೇಜನ್ನು ಹೊರುವ ಸಂಕಟವನ್ನು ಎದುರಿಸಬೇಕಾಗುತ್ತದೆ. ಆದರೆ ಬೆಚ್ಚನೆಯ ಉಡುಪನ್ನು ತರದೇ ಇರಲೂ ಆಗುವುದಿಲ್ಲ. ಹೀಗಾಗಿ ನೀವು ಸ್ವೆಟರುಗಳ ಬದಲಿಗೆ ಥರ್ಮಲ್ ಉಡುಪುಗಳನ್ನು ಬಳಸಿಕೊಳ್ಳಬಹುದು.
ಈ ಥರ್ಮಲ್ ಉಡುಪುಗಳೆಂದರೆ ಉಲ್ಲನ್ನಿನಿಂದ ತಯಾರಿಸಲಾದ ಬಟ್ಟೆಗಳು. ಇವು ನಮ್ಮ ಮೈಗೆ ಬಿಗಿಯಾಗಿ ಅಂಟಿಕೊಂಡು ಚಳಿಯನ್ನು ಸಾಕಷ್ಟು ಮಟ್ಟಿಗೆ ತಡೆಯುತ್ತವೆ. ಇವುಗಳನ್ನು ಧರಿಸಿಕೊಂಡು, ಮೇಲೆ ಅಂಗಿ, ಪ್ಯಾಂಟು, ಚೂಡಿದಾರ ಅಥವಾ ಸೀರೆಯನ್ನು ಧರಿಸಿಕೊಳ್ಳಬಹುದು. ಇವುಗಳ ತೂಕ ಮತ್ತು ಗಾತ್ರ ಎರಡೂ ತೀರಾ ಕಡಿಮೆ ಇರುವುದರಿಂದ ಇವನ್ನು ಸಾಗಿಸುವುದು ಸುಲಭ. ನಿಮ್ಮ ಲಗೇಜಿನಲ್ಲಿ ಇರುವ ವಸ್ತ್ರಗಳ ಜೊತೆಯಲ್ಲಿಯೇ ಏನೂ ಹೆಚ್ಚಿನ ವ್ಯತ್ಯಾಸವಿಲ್ಲದಂತೆ ಇಟ್ಟುಕೊಂಡು ತರಬಹುದು.
ಇವುಗಳು ಸುಮಾರು 500 – 750 ರೂಪಾಯಿಗಳ ಮಧ್ಯದಲ್ಲಿ ದೊರೆಯುತ್ತವೆ. ಅಮೆಜಾನ್ ಅಥವಾ ಫ್ಲಿಪ್ ಕಾರ್ಟ್ ಮೂಲಕವೂ ಖರೀದಿಸಬಹುದು. ಬನಿಯನ್ನು ಮಾರಾಟ ಮಾಡುವ ಅಂಗಡಿಗಳಲ್ಲಿಯೂ ಸುಲಭವಾಗಿ ದೊರೆಯುತ್ತವೆ. ಅಂಗಡಿಗೇ ಹೋಗಿ ನಿಮ್ಮ ಅಗತ್ಯಕ್ಕೆ ತಕ್ಕನಾದ ಥರ್ಮಲ್ ವೇರ್ ಅನ್ನು ಖರೀದಿಸುವುದು ಉತ್ತಮ ಪಕ್ಷ. ಲಕ್ಸ್, ಅಮುಲ್, ಆಲ್ಪಾ, ವಿಮಲ್ ಮೊದಲಾದ ಉತ್ತಮ ಕಂಪನಿಗಳದ್ದು ಲಭ್ಯವಿದೆ.
ಇದೆಲ್ಲ ಬೇಡ ನಮಗೆ ನಾವು ಸ್ವೆಟರನ್ನೇ ತಂದುಕೊಳ್ಳುತ್ತೇವೆ ಎಂದರೂ ನಿಮ್ಮ ಇಷ್ಟ. ಆದರೆ ಯಾತ್ರಾ ಪ್ಯಾಕೇಜಿನಲ್ಲಿ ನಿಮ್ಮ ಲಗೇಜು ಸಾಗಿಸುವ ವೆಚ್ಚವು ಸೇರಿರುವುದಿಲ್ಲ ಇದು ನಿಮ್ಮ ಗಮನದಲ್ಲಿ ಇರಲಿ. ನಿಮ್ಮ ಶಕ್ತಿಯ ಅಳತೆಯಲ್ಲಿಯೇ ಲಗೇಜ್ ಅನ್ನು ತಂದುಕೊಳ್ಳುವುದು ನಿಮಗೆ ಅನುಕೂಲಕರ.





Leave a Reply