ಹಿಮಾಲಯದ ಯಾತ್ರೆಯಲ್ಲಿ ಎದುರಾಗುವ ಆರೋಗ್ಯದ ಸಮಸ್ಯೆಗಳು

Atri Soonu Avatar
ಹಿಮಾಲಯದ ಯಾತ್ರೆಯಲ್ಲಿ ಎದುರಾಗುವ ಆರೋಗ್ಯದ ಸಮಸ್ಯೆಗಳು
ಗಮನಿಸಿ

ಇಲ್ಲಿ ಕೊಟ್ಟಿರುವ ಹೆಚ್ಚಿನ ಅಂಶಗಳು ಬದರೀನಾಥದ್ದೇ ಆದರೂ, ನೇಪಾಳ, ಯಮುನೋತ್ರಿ ಮತ್ತು ಸಿಂಧುದರ್ಶನ ಮತ್ತಿತರ ಹಿಮಾಲಯದ ಯಾತ್ರೆಗಳಿಗೂ ಇವೇ ಮಾಹಿತಿ ಮತ್ತು ನಿಯಮಗಳು ಅನ್ವಯವಾಗುತ್ತವೆ.

ಬದರಿಯ ಬೆಟ್ಟಗಳು ಎಷ್ಟು ಎತ್ತರದಲ್ಲಿವೆ?

ಬಹಳ ಜನರು ಬದರಿಯ ಬಗ್ಗೆ ತಿಳಿದಿರುವುದು ಏನೆಂದರೆ ಬದರಿಯು ಬೆಟ್ಟದ ಮೇಲಿದೆ ಮತ್ತು ಇಲ್ಲಿ ಚಳಿಯು ಬಹಳ ಎಂದು. ಹೌದು ಈ ಮಾಹಿತಿಯು ನಿಜ. ಆದರೆ ಬೆಟ್ಟದ ಗಾತ್ರ ಮತ್ತು ಚಳಿಯ ಪ್ರಮಾಣದ ಬಗ್ಗೆ ಶೇಕಡಾ 95 ಜನಕ್ಕೆ ಸರಿಯಾದ ಮಾಹಿತಿ ಇಲ್ಲ. ಕೆಲವರು ಹೇಳುವುದುಂಟು. ನಾವು ಕೊಡಚಾದ್ರಿಯನ್ನು ಹತ್ತಿದ್ದೇವೆ, ನಾವು ಶಿವನೇರಿ ಪರ್ವತ ಹತ್ತಿ ಇಳಿದಿದ್ದೇವೆ, ನಾವು ತಿರುಮಲಕ್ಕೆ ನಡೆದೇ ಹೋಗುತ್ತೇವೆ ಎಂದು. ಈ ಎಲ್ಲ ಪರ್ವತಗಳು ಕೂಡ ಕಷ್ಟಸಾಧ್ಯವಾದವುಗಳೇ. ಒಪ್ಪೋಣ. ಆದರೆ ಹಿಮಾಲಯದ ಬೆಟ್ಟಗಳನ್ನು ತಿರುಮಲೆ, ಪುಣೆ, ಬೆಂಗಳೂರಿನ ಸುತ್ತಮುತ್ತಲಿನ ಬೆಟ್ಟಗಳಿಗೆ ಹೋಲಿಕೆ ಮಾಡಲಾಗದು.

ಎತ್ತರದಲ್ಲಿ ನಮ್ಮ ದಕ್ಷಿಣದ ಕೆಲವು ಬೆಟ್ಟಗಳ ಮತ್ತು ಬದರಿಯ ಬೆಟ್ಟಗಳ ತುಲನೆಯನ್ನು ಇಲ್ಲಿ ಕೊಟ್ಟಿದ್ದೇವೆ. ಗಮನಿಸಿ

  • ಆಗುಂಬೆ : 2170 ಅಡಿಗಳು
  • ತಿರುಮಲೆ : 3200 ಅಡಿಗಳು
  • ಚಾಮುಂಡಿ ಬೆಟ್ಟ: 3489 ಅಡಿಗಳು
  • ಪುಣೆಯ ಸಿಂಹಗಡ : 4321 ಅಡಿಗಳು
  • ಕೊಡಚಾದ್ರಿ : 4400 ಅಡಿಗಳು
  • ಊಟಿ: 7349 ಅಡಿಗಳು
  • ಬದರೀನಾಥ: 10170 ಅಡಿಗಳು
  • ಮುಕ್ತಿನಾಥ ಪರ್ವತ 12175 ಅಡಿಗಳು

ಚಳಿಯೇ ದೊಡ್ಡ ಸಮಸ್ಯೆಯಲ್ಲ

ಎತ್ತರದಲ್ಲಿ ಹಿಮಾಲಯದ ಬೆಟ್ಟಗಳಿಗೆ ಹಿಮಾಲಯದ ಬೆಟ್ಟಗಳೇ ಸಾಟಿ. ಬದರೀನಾಥವು ಸಮುದ್ರ ಮಟ್ಟದಿಂದ 10200 ಅಡಿ ಎತ್ತರದಲ್ಲಿದೆ. ಇಷ್ಟು ಎತ್ತರದಲ್ಲಿ ಇರುವ ಊರು ಆದ್ದರಿಂದ ಇಲ್ಲಿ ಹೆಚ್ಚಿನ ಚಳಿಯು ಸಹಜವೇ ಆಗಿದೆ. ಬೇಸಿಗೆಯಲ್ಲಿಯೂ ರಾತ್ರಿಯ ಹೊತ್ತು ವಾತಾವರಣವು 3-4 ಡಿಗ್ರಿಗೆ ಇಳಿಯುವುದು ಇಲ್ಲಿ ಅತ್ಯಂತ ಸಾಮಾನ್ಯ. ಆದರೆ ಹೆಚ್ಚಿನ ಸಮಸ್ಯೆ ಇರುವುದು ಚಳಿಯಲ್ಲಿ ಅಲ್ಲ.

  • ಇಲ್ಲಿ ಆಮ್ಲಜನಕದ ಕೊರತೆ ಇರುವುದೇ ನಿಜವಾದ ಸಮಸ್ಯೆ.
  • 10000 ಅಡಿಗಳಿಗಿಂತ ಎತ್ತರದಲ್ಲಿ ಇರುವುದರಿಂದ ಇಲ್ಲೆಲ್ಲ ಗಾಳಿಯಲ್ಲಿ ಆಮ್ಲಜನಕವು ವಿರಳವಾಗಿ ಹರಡಿಕೊಂಡಿರುತ್ತದೆ.
  • ದಕ್ಷಿಣಭಾರತದ ಜನರಿಗೆ ಇಷ್ಟು ಕಡಿಮೆ ಆಮ್ಲಜನಕದಲ್ಲಿ ಉಸಿರಾಟದ ಸಮಸ್ಯೆ, ತೀವ್ರವಾದ ಹೃದಯ ಬಡಿತ, ತಲೆ ಸುತ್ತುವುದು ಇಂತಹ ಸಮಸ್ಯೆಗಳು ಆಗುತ್ತವೆ.
  • ನಮ್ಮ ಊರಿನಲ್ಲಿ ನಡೆದಾಡುವಂತೆ ಜೋರಾಗಿ ನಡೆದಾಡಿದರೆ ಗಂಭೀರವಾದ ಸಮಸ್ಯೆಗಳೇ ಆಗಬಹುದು. ಹೀಗಾಗಿ ಜಾಗ್ರತೆ ವಹಿಸಿ. ಜಾಗ್ರತೆ ಇಂದ ಇದ್ದರೆ ಹೆಚ್ಚಿನ ತೊಂದರೆ ಆಗಲಾರದು.
  • ಇನ್ನೂ ಕೆಲವರಿಗೆ ಎತ್ತರದ ಸ್ಥಳಗಳ ಸಮಸ್ಯೆ ಇರುತ್ತದೆ. ಅವರ ದೇಹವು ತಕ್ಷಣಕ್ಕೆ ಸಮುದ್ರಮಟ್ಟದಿಂದ 6000+ ಅಡಿಗಳಷ್ಟು ಎತ್ತರದ ಹವಾಮಾನಕ್ಕೆ ಹೊಂದಿಕೊಳ್ಳುವುದಿಲ್ಲ.
  • ಕೆಲವರಿಗೆ ಕಿವಿಯು ಮುಚ್ಚಿಕೊಂಡ ಅನುಭವ ಆಗಬಹುದು. ಆದರೆ ಬಹಳಷ್ಟು ಸಂದರ್ಭಗಳಲ್ಲಿ ಈ ಸಮಸ್ಯೆಯು ತಾನಾಗಿಯೇ ಬಗೆಹರಿಯುತ್ತದೆ.

ಹಾಗೆಂದು ಹೆದರಿಕೊಂಡು ರೂಮಿನಲ್ಲಿಯೇ ಕುಳಿತುಬಿಡಬೇಡಿ. ನಾವು ಈಗ ಹೇಳುವ ಕ್ರಮಗಳನ್ನು ಅನುಸರಿಸಿ, ಬಹುರಮ್ಯವಾದ ಬದರಿಯ ಪ್ರಕೃತಿಯನ್ನು ಆಸ್ವಾದನೆ ಮಾಡಿರಿ.

ನೀವು ನಾಳೆಯಿಂದ ಈ ಕೆಲವೊಂದು ಅಭ್ಯಾಸಗಳನ್ನು ಪ್ರಾರಂಭಿಸಿ

  • ಪ್ರತಿನಿತ್ಯ ಬೆಳಿಗ್ಗೆ ಬೇಗ, ಅಂದರೆ ಸುಮಾರು 5:00ಕ್ಕೆ ಸ್ನಾನವನ್ನು ಮುಗಿಸುವುದು
  • “ವಿವರವಾದ ಪ್ರಾಣಾಯಾಮ ಸಹಿತ” ಸಂಧ್ಯಾವಂದನೆ / ಗುರುಮಂತ್ರ ಮಾಡುವುದು
  • ಪ್ರತಿದಿನ ತಪ್ಪದೇ ಕನಿಷ್ಠ 3-4 ಕಿಲೋಮೀಟರು ನಿಧಾನವಾಗಿ, ಎಲ್ಲಿಯೂ ನಿಲ್ಲದಂತೆ ನಡೆಯುವುದು
  • ದಿನಕ್ಕೆ ಕನಿಷ್ಠ 50 – 75 ಮೆಟ್ಟಿಲುಗಳನ್ನು ನಿಧಾನವಾಗಿ ಹತ್ತಿ ಇಳಿಯುವುದು
  • ಯೋಗಾಭ್ಯಾಸವನ್ನು ನೀವು ಮಾಡುತ್ತೀರಿ ಎಂದಾದರೆ ಅದು ನಿಜಕ್ಕೂ ಉತ್ತಮ.
  • ಈ ಅಂಶಗಳನ್ನು ನೀವು ನಾಳೆಯಿಂದಲೇ ಪ್ರಾರಂಭಿಸಿದರೆ, ನಿಮ್ಮ ಬದರೀಯಾತ್ರೆಯಲ್ಲಿ ಆರೋಗ್ಯದ ಸಮಸ್ಯೆಗಳನ್ನು ಸುಲಭವಾಗಿ ನಿಭಾಯಿಸಬಹುದು.

ಬದರಿಗೆ ಬಂದ ನಂತರ

  • ವೇಗದ ಹೆಜ್ಜೆ ಹಾಕಿ ನಡೆಯದಿರಿ
  • ಕೋಣೆಗಳಿಗೆ ಹೋಗುವಾಗ ನಿಧಾನವಾಗಿ ಒಂದೊಂದೇ ಮೆಟ್ಟಿಲು ಹತ್ತಿ. ಅವಸರ ಬೇಡವೇ ಬೇಡ
  • ಬದರೀ ನಾರಾಯಣನ ಗುಡಿಯಿಂದ ಕೋಣೆಗೆ ಬರುವಾಗ ಅಲಕನಂದಾ ನದಿಯನ್ನು ದಾಟಿ, ಬದರಿ ಪಟ್ಟಣದ ಪೋಲಿಸ್ ನಿಲ್ದಾಣದವರೆಗೆ ಚೂರು ಏರು ದಾರಿಯಿದೆ. ಇದು ಕೇವಲ 100-150 ಮೀಟರು ಉದ್ದ ಅಷ್ಟೆ. ಆದರೆ ಆಮ್ಲಜನಕದ ಕೊರತೆಯಿಂದ ಬಹಳ ಸುಸ್ತಿನ ಅನುಭವ ಆಗುತ್ತದೆ. ಇದಿಷ್ಟು ದಾರಿಯನ್ನು ನಿಧಾನವಾಗಿ ಕ್ರಮಿಸಿ. ಅಲ್ಲಲ್ಲೇ ಕುಳಿತುಕೊಂಡು ಬನ್ನಿ. ಅವಸರ ಬೇಡ.
  • ನಿಮ್ಮ ದೇಹವು ಒಪ್ಪದೇ ಇದ್ದಲ್ಲಿ ಅಲಕನಂದಾ ನದಿಯ ಸ್ನಾನವನ್ನು ಮಾಡಲು ಹೋಗಲೇಬೇಡಿ. ಇದು ಕೇವಲ ತಣ್ಣೀರು ಮಾತ್ರವಲ್ಲ. ನಮ್ಮ ಕೈಲಿ ನಿಭಾಯಿಸಲು ಆಗದೇ ಇರುವಷ್ಟು ರಭಸವುಳ್ಳ ನದಿ.
  • ಶ್ರಾದ್ಧಕ್ಕೆ ಕುಳಿತಾಗ ಒದ್ದೆ ಬಟ್ಟೆಯನ್ನು ಸರ್ವಥಾ ಧರಿಸದಿರಿ. ರೇಶ್ಮೆ ಪಂಚೆ/ಮುಗುಟ ಮತ್ತು ಶಾಲು ಧರಿಸಿಯೇ ಕುಳಿತುಕೊಳ್ಳಿರಿ.
  • ಹೃದಯ ಸಂಬಂಧಿ ಸಮಸ್ಯೆಗಳಿದ್ದರೆ ಪದೇ ಪದೇ ಊರು ಸುತ್ತಬೇಡಿ. ಮಾನಾ ಗ್ರಾಮದ ಭೇಟಿಗೆ ಹೋಗದೇ ಇರುವುದು ಕ್ಷೇಮ.
  • ವಿಪರೀತ ಚಳಿಯು ಇದೆಯೆಂದು ತೀರಾ ಬಿಸಿ ಬಿಸಿಯಾದ ನೀರನ್ನು ಕುಡಿಯದಿರಿ. ಥರ್ಮಾಸ್ ಫ್ಲಾಸ್ಕಿನಲ್ಲಿ ಬಿಸಿನೀರನ್ನು ಇಟ್ಟುಕೊಂಡಿದ್ದು, ನಿಮ್ಮ ದೇಹಕ್ಕ ಹಿತ ಎನಿಸುವಷ್ಟು ಬೆಚ್ಚಗೆ ಮಾಡಿಕೊಂಡು ಆಗಾಗ ಚೂರು ಚೂರು ಕುಡಿಯುತ್ತಿರಿ.
  • ಮಲಗಿದಾಗ ಚಳಿ ಇದೆ ಎಂದು ಮುಖವನ್ನೂ ಮುಚ್ಚಿಕೊಳ್ಳಬೇಡಿ. ಸಂಪೂರ್ಣ ಮುಚ್ಚಿಕೊಂಡು ಮಲಗಿದರೆ ಗಂಟಲು ಸೋಂಕು ಉಂಟಾಗುತ್ತದೆ. ಟೋಪಿಯನ್ನು ಚೆನ್ನಾಗಿ ಧರಿಸಿ, ಮೂಗಿನ ಹೊರಳೆಗಳಿಗೆ ಕೊಬ್ಬರಿ ಎಣ್ಣೆ / ವ್ಯಾಸಲೈನ್ ಸವರಿಕೊಳ್ಳಿರಿ.
  • ದೇಹದ ಶಕ್ತಿಯನ್ನು ಅನಗತ್ಯ ಖರ್ಚು ಮಾಡದೆ, ಇರುವ ಶಕ್ತಿಯನ್ನು ಉಳಿಸಿಕೊಳ್ಳುತ್ತಾ ಇರಿ.
  • ಯಾವುದೇ ಕಾರಣಕ್ಕೂ ಒಬ್ಬರೇ ಸುತ್ತಾಡದಿರಿ. ಗುಂಪಿನಲ್ಲಿಯೇ ಇರಿ. ತಲೆ ಸುತ್ತು, ಉಸಿರಾಟದ ತೊಂದರೆ ಆದಾಗ ಗುಂಪಿನಲ್ಲಿದ್ದರೆ ಸಹಾಯವು ಸಿಗುತ್ತದೆ.

ಗಮನಿಸಲೇಬೇಕಾದ ಅಂಶಗಳುಗಳು

  • ಯಾತ್ರಾ ಮಾರ್ಗದರ್ಶಿಗಳ ಮಾತನ್ನು ತಪ್ಪದೇ ಅನುಸರಿಸುವುದು.
  • ಪ್ರಯಾಣಿಸುವಾಗ ದಾರಿಯಲ್ಲಿ ಸಿಗುವ ತಿನಿಸುಗಳನ್ನು ಸೇವಿಸದೇ ಇರುವುದು
  • ನಿಮ್ಮ ಲಗೇಜಿನ ಗಾತ್ರವನ್ನು ಬೆಳೆಸಿಕೊಳ್ಳದೇ ಇರುವುದು. ಚಿಕ್ಕ ಲಗೇಜು ಹೆಚ್ಚಿನ ಆರಾಮ.

Leave a Reply

Your email address will not be published. Required fields are marked *

error: Content is protected !!