ಅನೇಕರು ಕಾಶೀ ಯಾತ್ರೆಯನ್ನು ಮೊದಲಬಾರಿ ಕೈಗೊಂಡಿದ್ದೀರಿ. ಈ ಯಾತ್ರೆಯಲ್ಲಿ ಏನು ವಸ್ತುಗಳನ್ನು ತೆಗೆದುಕೊಂಡು ಹೋಗಬೇಕು ಎನ್ನುವ ಗೊಂದಲಗಳನ್ನು ಈ ಲೇಖನವು ಪರಿಹರಿಸುತ್ತದೆ. ನಿಧಾನವಾಗಿ ಓದಿಕೊಂಡು, ಅದರಂತೆ ಅನುಸರಿಸಿ ನಿಮ್ಮ ಯಾತ್ರೆಯನ್ನು ಸುಗಮಗೊಳಿಸಿಕೊಳ್ಳಬಹುದು.
ಗಮನಿಸಿ : ಅನೇಕ ಕಾರಣಗಳಿಂದ ನಿಮ್ಮ ಲಗೇಜ್ ಅನ್ನು ಪ್ರತ್ಯೇಕವಾಗಿ ಸಾಗಿಸುವ ವ್ಯವಸ್ಥೆ ಇರುವುದಿಲ್ಲ. ಹಿತಮಿತವಾದ ಲಗೇಜ್ ಅನ್ನೇ ತಂದುಕೊಳ್ಳಿರಿ.
ಕಡ್ಡಾಯವಾಗಿ ತರಬೇಕಾದದ್ದು
- ನಿಮ್ಮ ಆಧಾರ್ ಕಾರ್ಡಿನ, ಪೂರ್ತಿಗಾತ್ರದ ಮೂರು ಅಥವಾ ನಾಲ್ಕು ಪ್ರತಿಗಳು.
- ಊಟದ ತಟ್ಟೆ ಮತ್ತು ನೀರು ಕುಡಿಯುವ ಲೋಟ.
- ಬಿಸಿ ನೀರಿಗಾಗಿ ಒಂದು ಥರ್ಮಾಸ್ ಫ್ಲಾಸ್ಕ್
- ನಿಮ್ಮ ಅತ್ಯಗತ್ಯವಾದ ಔಷಧಿಗಳು
- ಒಂದು ಕೈಚೀಲ (ಒಂದು ಜೊತೆ ಬಟ್ಟೆ + ಊಟದ ತಟ್ಟೆ ಇಷ್ಟನ್ನೇ ಇಟ್ಟುಕೊಳ್ಳುವ ಗಾತ್ರದ್ದು)
ಕೆಲವೆಡೆ ನಿಮ್ಮ ಸಂಪೂರ್ಣ ಲಗೇಜ್ ಅನ್ನು ಬಸ್ಸಿನಿಂದ ಹೊರತೆಗೆಯುವ ಅಗತ್ಯವು ಇರುವುದಿಲ್ಲ. ಆಂತಹ ಸಂದರ್ಭದಲ್ಲಿ ನಿಮ್ಮ ಟೂತ್ ಬ್ರಷ್, ಟೂಥ್ ಪೇಸ್ಟ್, ಸಾಬೂನು, ಒಂದು ಜೊತೆ ಬಟ್ಟೆ ಮತ್ತು ಊಟಕ್ಕೆ ನಿಮ್ಮ ತಟ್ಟೆ ಲೋಟಗಳನ್ನು ಈ ಕೈಚೀಲದಲ್ಲಿ ಇಟ್ಟುಕೊಂಡಿರಿ. ಇದರಿಂದ ಪ್ರತೀ ಸಲವೂ ನೀವು ಸೂಟ್ ಕೇಸನ್ನು ಹೊತ್ತುಕೊಂಡು ತಿರುಗುವ ಅಗತ್ಯ ಬೀಳುವುದಿಲ್ಲ. (ಚಿತ್ರವನ್ನು ನೋಡಿರಿ)
ಶ್ರಾದ್ಧವನ್ನು ಮಾಡುವವರು ತರಬೇಕಿರುವ ವಸ್ತುಗಳು
- ಸಂಧ್ಯಾವಂದನೆಯ ಪಾತ್ರೆಗಳು
- ಒಂದು ಚಿಕ್ಕ ಗಾತ್ರದ ತಾಮ್ರ ಅಥವಾ ಹಿತ್ತಾಳೆಯ ತಟ್ಟೆ
- ಪಿತೃಗಳ ಹೆಸರಿನ ಪಟ್ಟಿ
- ಒಂದು ರೂಪಾಯಿಯ 50 – 75 ನಾಣ್ಯಗಳು
ವೇಣಿದಾನಕ್ಕೆ ತರಬೇಕಿರುವ ವಸ್ತುಗಳು
ವೇಣಿದಾನದ ಸಂದರ್ಭದಲ್ಲಿ ಅದಕ್ಕೆ ಬೇಕಿರುವ ಬಾಗಿನ, ಅರಿಷಿನ ಕುಂಕುಮ, ವೀಳ್ಯದೆಲೆ, ಹೂವು ಇತ್ಯಾದಿ ವಸ್ತುಗಳನ್ನು ನಮ್ಮ ಸಂಸ್ಥೆಯಿಂದಲೇ ವ್ಯವಸ್ಥೆ ಮಾಡುತ್ತೇವೆ. ಯಾತ್ರಿಕರು ಇವುಗಳನ್ನು ಪ್ರತ್ಯೇಕವಾಗಿ ತರುವ ಅಗತ್ಯವೇನಿಲ್ಲ. ಆದರೂ ನಿಮಗೆ ಮತ್ತೂ ದಾನ ಮಾಡುವ ಇಚ್ಛೆಯಿದ್ದಲ್ಲಿ ಈ ಕೆಳಕಂಡ ವಸ್ತುಗಳನ್ನು ತಂದುಕೊಳ್ಳಬಹುದು.
- ಸೀರೆ
- ಪಂಚೆ (9 ಮೊಳದ್ದು)
- ಮಡಿಪಂಚೆಗಳು (7 ಮೊಳದ್ದು)
- ಬಾಗಿನ
ಕಡ್ದಾಯವಲ್ಲದ, ಆದರೆ ಬಹಳ ಉಪಯುಕ್ತವಾಗುವ ವಸ್ತುಗಳು
- 15 ಮೀಟರು ಉದ್ದದ ಒಂದು ನೈಲಾನ್ ಹಗ್ಗ (ಬಟ್ಟೆ ಒಣಗಿಸಿಕೊಳ್ಳಲು) (ಚಿತ್ರವನ್ನು ನೋಡಿರಿ)
- 20-25 ಸೇಫ್ಟಿ ಪಿನ್ನುಗಳು (ಬಟ್ಟೆಗಳನ್ನು ಒಣಗಿಸುವಾಗ ಭದ್ರಪಡಿಸಲು) (ಚಿತ್ರವನ್ನು ನೋಡಿರಿ)
- ಸ್ಯಾನಿಟೈಸರ್
- ಮುಖಕ್ಕೆ ಮಾಸ್ಕ್
12 ದಿನಗಳ ಯಾತ್ರೆ ಎಂದ ಮಾತ್ರಕ್ಕೆ ಹನ್ನೆರಡೂ ದಿನಗಳ ಬಟ್ಟೆಗಳನ್ನು ತರುವ ಅವಶ್ಯಕತೆಯು ಇಲ್ಲ. 7 ದಿನಗಳ ಬಟ್ಟೆಯನ್ನು ತಂದರೆ ಸಾಕು. ಯಾಕೆಂದರೆ ನಮ್ಮ ಯಾತ್ರೆಯಲ್ಲಿ ಚಿತ್ರಕೂಟ, ಪ್ರಯಾಗ, ಅಯೋಧ್ಯಾ, ಗಯಾ ಮತ್ತು ಕಾಶಿ ಇಲ್ಲೆಲ್ಲವೂ ನಿಮ್ಮ ಬಟ್ಟೆಗಳನ್ನು ಶುಚಿಗೊಳಿಸಿಕೊಂಡು ನಿಮ್ಮ ಬಟ್ಟೆಗಳನ್ನು ಒಗೆದು ಒಣಗಿಸಿಕೊಳ್ಳಲು ಅವಕಾಶವು ಸಿಗುತ್ತದೆ. ಇಂತಹ ಸಂದರ್ಭಗಳಲ್ಲಿ ನೀವು ನಿಮ್ಮ ಒದ್ದೆ ಬಟ್ಟೆಗಳನ್ನು ಈ ನೈಲಾನ್ ಹಗ್ಗದ ಸಹಾಯದಿಂದ ಒಣಗಿಸಿಕೊಳ್ಳಬಹುದು. ಸೇಫ್ಟಿ ಪಿನ್ನುಗಳನ್ನು ಬಳಸಿ ಈ ಒಣಗಿಸಲು ಹಾಕಿದ ಬಟ್ಟೆಗಳನ್ನು ಭದ್ರಪಡಿಸಬಹುದು. ಬಟ್ಟೆ ಕ್ಲಿಪ್ಪುಗಳಾದರೆ ಬ್ಯಾಗಿನಲ್ಲಿ ಹೆಚ್ಚಿನ ಸ್ಥಳವನ್ನು ಬೇಡುತ್ತವೆ. ಸೇಫ್ಟಿಪಿನ್ನುಗಳಾದರೆ ಹೆಚ್ಚಿನ ಜಾಗವನ್ನೂ ಬೇಡುವುದಿಲ್ಲ. ಸಾಗಿಸಲೂ ಸುಲಭ. 12 ದಿನಗಳ ಬಟ್ಟೆಯ ಲಗೇಜು ನಿಮಗೆ ಖಂಡಿತವಾಗಿಯೂ ಹೊರೆಯಾಗುತ್ತದೆ.
ಯಾತ್ರೆಗೆ ತರಬಾರದ ವಸ್ತುಗಳು
- ಆಭರಣಗಳು
- ದುಬಾರಿವಸ್ತುಗಳು
- ಅನಗತ್ಯ ನಗದು
- ಹಾಸಿಗೆ, ಹೊದಿಕೆ, ಚಾಪೆ
- ಎಳ್ಳು, ಗೋಪೀಚಂದನ, ಜನಿವಾರ
ಬೆಚ್ಚಗಿನ ಉಡುಪುಗಳು
- ಒಂದು ದಪ್ಪನೆಯ ಶಾಲು. ಸಾಕು. ಬೇರೇನೂ ಬೇಡ.
ಸ್ವೆಟರ್ ಮತ್ತು ಮಂಕೀ ಟೊಪ್ಪಿಗೆಯಂತಹ ಬೆಚ್ಚನೆಯ ಉಡುಪುಗಳನ್ನು ಒಂದು ವೇಳೆ ನವೆಂಬರಿನಿಂದ ಜನೆವರಿಯ ಮಧ್ಯದಲ್ಲಿ ಯಾತ್ರೆ ಮಾಡುತ್ತಿದ್ದೀರಾದಲ್ಲಿ ಮಾತ್ರ ತನ್ನಿರಿ. ಬೇರೆ ಯಾವ ಸಮಯದಲ್ಲಿಯೂ ಇವುಗಳ ಅಗತ್ಯವಿಲ್ಲ. ರಾತ್ರಿ ವಾಸ್ತವ್ಯ ಇರುವ ಜಾಗದಲ್ಲಿ ನಿಮಗೆ ರೂಮುಗಳನ್ನು ಒದಗಿಸುತ್ತೇವೆ. ಈ ರೂಮುಗಳಲ್ಲಿ ಮಂಚ, ದಿಂಬು, ಹೊದಿಕೆಗಳು ಇರುತ್ತವೆ. ರೈಲಿನಲ್ಲಿ ಎ.ಸಿ. ದರ್ಜೆಯ ಪ್ರಯಾಣ ಮಾಡುತ್ತೀರಿ ಆದಲ್ಲಿ ನಿಮಗೆ ಹೊದಿಕೆಯು ರೈಲಿನಲ್ಲಿಯೇ ದೊರೆಯುತ್ತದೆ.
.











Leave a Reply