ಬದರಿಯ ದಾರಿಯು ಭಯಾನಕವೇ?

rnsharma18 Avatar
ಬದರಿಯ ದಾರಿಯು ಭಯಾನಕವೇ?

ಮೊದಲ ಬಾರಿಗೆ ಬದರೀಯಾತ್ರೆಯನ್ನು ಕೈಗೊಂಡಿದ್ದೀರಿ ಎಂದಾದರೆ, ಈಗಾಗಲೇ ಬದರೀಯಾತ್ರೆಯನ್ನು ಮಾಡಿರುವ ನಿಮ್ಮ ಪರಿಚಿತರಿಂದ ಯಾತ್ರೆಯ ಬಗ್ಗೆ, ಇಲ್ಲಿನ ದಾರಿಗಳ ಬಗ್ಗೆ ಕೇಳಿತಿಳಿದಿರಬಹುದು. ಸಹಜವಾದ ಕುತೂಹಲವಿದು. ಆದರೆ ಅನೇಕರು ಬದರಿಯ ದಾರಿಯನ್ನು ಭಾರೀ ಭಯಾನಕ ಎಂದೂ, ತಲೆತಿರುಗಿ ಬೀಳುತ್ತೀರಿ ಎಂದೂ, ರಸ್ತೆ ಒಂಚೂರೂ ಸರಿ ಇಲ್ಲ ಎಂದು, ಲ್ಯಾಂಡ್ ಸ್ಲೈಡ ಆದರೆ ಮುಗೀತು ಯಾರು ಎಲ್ಲೆಲ್ಲಿ ಇರ್ತಾರೋ ಅಲ್ಲೇ ಇದ್ದು ಬಿಡಬೇಕು ಎಂದೆಲ್ಲ ಹೇಳಿರಲೂಬಹುದು.

ಬಹಳ ಹಿಂದೆ ಹೋಗಿ ಬಂದವರಿಂದ ನೀವೇನಾದರೂ ಮಾಹಿತಿಯನ್ನು ಪಡೆದಿದ್ದರೆ ಚಿಂತೆ ಮಾಡದಿರಿ. ಈಗಿನ ರಸ್ತೆಯ ಗುಣಮಟ್ಟಗಳು ಬಹಳಷ್ಟು ಉತ್ತಮವಾಗಿವೆ.

ದಾರಿಗಳು ಬಹಳ ಕಷ್ಟವೇ?
ಇಲ್ಲಿನ ದಾರಿಗಳು ಮೊದಲೆಲ್ಲ ದುರ್ಗಮವಾಗಿದ್ದವು. ಬದರಿಯನ್ನು ತಲುಪುವುದು ಬಹಳ ಪ್ರಯಾಸಕರವಾಗಿತ್ತು. ರಸ್ತೆಗಳೆಲ್ಲ ಗುಂಡಿಗಳಿಂದ ಕೂಡಿದ್ದವು. ಭೂಕುಸಿತವು ಆದಾಗ ತೀರಾ ಯಾತ್ರಿಕರ ಅವಸ್ಥೆ ತೀರಾ ಕಷ್ಟವಾಗುತ್ತಿತ್ತು. ಆದರೆ ಮಾನ್ಯ ಮೋದಿಯವರ ಚಾರ್ಧಾಮ್ ಪರಿಕ್ರಮಾ ಯೋಜನೆಯು ಪ್ರಾರಂಭಗೊಂಡ ನಂತರ ಇಲ್ಲಿ ಸರ್ವಋತು ರಸ್ತೆಗಳನ್ನು ನಿರ್ಮಿಸಲಾಗಿದೆ. ಪ್ರಯಾಣವು ಮೊದಲಿನಷ್ಟು ಕಠಿಣವೇನಲ್ಲ. ಉತ್ತಮ ಹೆದ್ದಾರಿಯು ನಿರ್ಮಾಣಗೊಂಡಿದೆ.

ಜನ ತಲೆತಿರುಗಿ ಬೀಳುತ್ತಾರೆಯೇ?
ಸಮುದ್ರಮಟ್ಟದಿಂದ 6000 ಅಡಿಗಳಿಗಿಂತ ಹೆಚ್ಚು ಎತ್ತರಕ್ಕೆ ಹೋದಾಗ, ನಮ್ಮ ದೇಹವು ಆ ಎತ್ತರಕ್ಕೆ ಹೊಂದಿಕೊಳ್ಳಲು ಆರಂಭಿಸುತ್ತದೆ. ಇದರ ಮೂರು ಪ್ರಮುಖ ಲಕ್ಷಣಗಳೆಂದರೆ ತಲೆತಿರುಗಿದ ಅನುಭವ, ಕಿವಿಗಳು ಮುಚ್ಚಿಕೊಂಡಂತೆ ಆಗುವುದು, ಹೃದಯದ ಬಡಿತದಲ್ಲಿ ಚೂರು ವೇಗವು ಹೆಚ್ಚುವುದು. ಇದು ಸಾಮಾನ್ಯವಾಗಿ ಕಂಡು ಬರುವ ಲಕ್ಷಣಗಳು. ಆದರೆ ಇದು ಕೆಲವೇ ನಿಮಿಷಗಳಲ್ಲಿ ಸರಿ ಹೋಗುತ್ತದೆ. ಎಲ್ಲರೂ ತಲೆತಿರುಗಿ ಬೀಳುವುದಿಲ್ಲ. ಹಾಗೇನಾದರೂ ಆಗುವುದಿದ್ದರೆ ಬದರಿಯ ದಾರಿಯಲ್ಲಿ ಎಲ್ಲ ಕಡೆ ತಲೆತಿರುಗಿ ಬಿದ್ದವರೇ ಇರಬೇಕಿತ್ತು. ಆದರೆ ಅಲ್ಲಿ ಕಾಣಬರುವುದು ಆನಂದ, ಉತ್ಸಾಹಗಳಿಂದ ಹಾರಾಡುವ ಜನರೇ! ಸೆಲ್ಫೀ ತೆಗೆದುಕೊಳ್ಳುವ ನೂರಾರು ಜನಗಳೇ.

ಭೂಕುಸಿತ (Land sliding) ಆಗುತ್ತದೆಯೇ
ಭೂಕುಸಿತವು ಸಾಮಾನ್ಯವಾಗಿ ಮಳೆಗಾಲದಲ್ಲಿ ಮತ್ತು ಮಳೆಗಾಲದ ನಂತರದ ಒಂದು ತಿಂಗಳ ಕಾಲ ಸಂಭವಿಸುತ್ತದೆ. ಈಗ ಪ್ರಯಾಣಿಕರ ಸಂರಕ್ಷಣೆಯ ಕ್ರಮಗಳು ಬಹಳಷ್ಟು ಉತ್ತಮಗೊಂಡಿವೆ. ಭೂಕುಸಿತವನ್ನು ಇಲ್ಲ ಎನ್ನುವಷ್ಟು ಮಟ್ಟಿಗೆ ನಿವಾರಿಸಲಾಗಿದೆ. ಒಂದು ವೇಳೆ ಭೂಕುಸಿತವು ಸಂಭವಿಸಿದರೂ, ಪ್ರಯಾಣಿಕರ ಅಪಾಯದ ಸಂಭವನೀಯತೆಯು ಬಹಳ ಕಡಿಮೆ ಆಗಿದೆ. ಕುಸಿದ ಪರ್ವತದ ಅವಶೇಷಗಳನ್ನು ಮಧ್ಯರಾತ್ರಿಯಾದರೂ ಸರಿ ತೆಗೆದು ಹಾಕಿ ಸಂಚಾರವನ್ನು ಸುಗಮಗೊಳಿಸಿಕೊಡುತ್ತಾರೆ.

ಇಲ್ಲಿನ ದಾರಿಗಳು ಭಯಾನಕವೇ?
ಈ ಪ್ರಶ್ನೆಗೆ ಉತ್ತರ ಚೂರು ಕಷ್ಟ. ಯಾಕೆಂದರೆ ಯಾರಿಗೆ ಯಾವ ವಿಷಯಕ್ಕೆ ಭಯ ಆಗುತ್ತದೆ? ಎಂಥ ರಸ್ತೆಗಳೆಂದರೆ ಭಯ ಆಗುತ್ತದೆ ಎಂದು ಅವರವರೇ ಹೇಳಬೇಕು. ತಿರುಮಲದ ರಸ್ತೆಯಲ್ಲಿ ಬಸ್ಸಿನಲ್ಲಿ ಹೋದಾಗ ನಿಮಗೆ ಭಯವಾಗಿಲ್ಲ ಎಂದರೆ ಇಲ್ಲಿಯೂ ಭಯವೇನೂ ಆಗುವುದಿಲ್ಲ. ಬೆಂಗಳೂರಿನಿಂದ ಚಿತ್ರದುರ್ಗಕ್ಕೆ ಹೋದಾಗ ಭಯವಾಗಿದೆ ಎಂದರೆ ಇಲ್ಲಿಯೂ ಭಯವಾಗುತ್ತದೆ. ವಾಸ್ತವ ಏನೆಂದರೆ, ಬದರೀನಾಥದ ರಸ್ತೆಗಳು ಬಹಳ ಅಂದರೆ ಬಹಳ ಎತ್ತರದಲ್ಲಿ ಸಾಗುವುದರಿಂದ ಮತ್ತು ಆಳವಾದ ಕಣಿವೆಯ ಪಕ್ಕದಲೇ ಸಂಚರಿಸುವುದರಿಂದ ಮೊದಮೊದಲಿಗೆ ಭಯವಾಗಬಹುದು. ಆದರೆ ನಿಧಾನವಾಗಿ ಪ್ರಯಾಣವು ಅಭ್ಯಾಸವಾಗುತ್ತದೆ.

ಬದರೀನಾಥದ ರಸ್ತೆಯು ನಯನ ಮನೋಹರವಾದುದು
ಬದರೀನಾಥಕ್ಕೆ ಹೋಗುವ ದಾರಿಯು ಬಹಳ ರುದ್ರರಮ್ಯವಾಗಿದೆ. ಪರ್ವತಗಳ ಎತ್ತರ, ಕಣಿವೆಗಳ ಆಳ, ಹಾಲಿನಂತೆ ಕಾಣುವ ಗಂಗೆ, ಅಲಕನಂದೆಯರು! ಅಲ್ಲಲ್ಲಿ ಹತ್ತಿಯಂತ ಮೋಡಗಳು! ಎಲ್ಲವೂ ದಕ್ಷಿಣಭಾರತದ ನಮಗೆ ಅಪರೂಪದ್ದು. ಹೃಷೀಕೇಶದಿಂದ ಬಸ್ಸು ಪರ್ವತವನ್ನು ಏರಲು ಪ್ರಾರಂಭಿಸುತ್ತದೆ. ಮೊದ ಮೊದಲು ಭಯದಿಂದ ಕೂಡಿದ ನಿಮ್ಮ ಮುಖಗಳಲ್ಲಿ ಕ್ರಮೇಣವಾಗಿ ಆಶ್ಚರ್ಯ ಮತ್ತು ಆನಂದಗಳು ಅರಳುವುದನ್ನು ನೋಡುವುದು ನನಗೆ ಒಂದು ಸಂತೋಷ. ಪ್ರತೀಬಾರಿ ನಾನು ಇದನ್ನು ಅನುಭವಿಸುವವನು.

ಪೀಪಲ್ ಕೋಟಿಯಿಂದ ಬದರೀನಾಥದ ಮಧ್ಯದ ಮಾರ್ಗವಂತೂ ದಿವ್ಯವಾದುದು. ನೋಡಲೇಬೇಕು ನೀವೆಲ್ಲ. ಈ ಸೌಂದರ್ಯವನ್ನು ನೀವೂ ನೋಡುವ ರೀತಿಯಲ್ಲಿಯೇ ನಮ್ಮ ವೇಳಾಪಟ್ಟಿಯನ್ನು ರೂಪಿಸಲಾಗಿದೆ. ನಿಮ್ಮ ಯಾತ್ರಾ ಅನುಭವವನ್ನು ಸುಂದರಗೊಳಿಸಲು ನಮ್ಮಿಂದ ಆದ ಎಲ್ಲ ಪ್ರಯತ್ನವನ್ನೂ ಮಾಡುತ್ತೇವೆ.

ನಾವುಗಳು ನಿಮ್ಮಿಂದ ಬಯಸುವುದು ಎರಡೇ ವಿಷಯಗಳು.

  1. ನಿಮ್ಮ ಸೌಹಾರ್ದಯುತ ಮಾತುಗಳ ಸಹಕಾರ
  2. ಸಮಯಪಾಲನೆ

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Search

Latest Posts

Categories

error: Content is protected !!