ಸುವರ್ಣಾನದಿಯು ಉಡುಪಿ ಜಿಲ್ಲೆಯಲ್ಲಿ ಹುಟ್ಟು ಉಡುಪಿ ಜಿಲ್ಲೆಯಲ್ಲಿಯೇ ಸಮುದ್ರವನ್ನು ಸೇರುವ ಒಂದು ಚಿಕ್ಕ ನದಿ. ಉಡುಪಿ ಜಿಲ್ಲೆಯ ಕಾರ್ಕಳದ ಬಳಿ ದಟ್ಟ ಅರಣ್ಯದಲ್ಲಿ ಹುಟ್ಟುತ್ತದೆ. ಅಲ್ಲಿಂದ ಹರಿದು ಶೀರೂರು ಮತ್ತು ಪುತ್ತಿಗೆ ಗ್ರಾಮಗಳನ್ನು ಬಳಸಿಕೊಂಡು ಉಡುಪಿಯ ಬಳಿಯ ಬೆಂಗ್ರೆ ಎನ್ನುವಲ್ಲಿ ಸೀತಾ ನದಿಯ ಜೊತೆಗೂಡಿ ಸುಂದರವಾದ ಡೆಲ್ಟಾವನ್ನು ಸೃಷ್ಟಿಸಿ ಸಮುದ್ರವನ್ನು ಸೇರುತ್ತದೆ. ನದಿಯ ಒಟ್ಟು ಉದ್ದ ಕೇವಲ ೫೦-೬೦ ಕಿ.ಮೀ. ಉದ್ದದಲ್ಲಿ ಚಿಕ್ಕದು ಹೌದು. ಆದರೆ ಮಹಿಮೆಯಲ್ಲಿ ಬಹಳ ದೊಡ್ಡದು.
ವೇದಾಚಲಹೃದುದ್ಭೂತಾಂ ಸುವರ್ಣಾಂ ಕೋ ನು ವರ್ಣಯೇತ್ |
ಅಹಂ ಸೋ ದಹ್ಯಮಾನಸ್ಯ ಶ್ರಾವಯಂತೀ ಸ್ವನಂ ಜನಾನ್ ||
ಎಂದು ಶ್ರೀ ವಾದಿರಾಜತೀರ್ಥರು ಈ ನದಿಯ ಮಹಿಮೆಯನ್ನು ವರ್ಣಿಸುತ್ತಾರೆ.
ವೇದ ಎನ್ನುವ ಪರ್ವತದ ಹೃದಯದಿಂದ ಜನಿಸಿರುವ ಈ ನದಿಯು ತನ್ನಲ್ಲಿ ಸ್ನಾನವನ್ನು ಮಾಡುವರ ಪಾಪಗಳನ್ನು ಕಿವಿಗಳಿಗೆ ಕೇಳುವಂತೆ ಸದ್ದಿನಿಂದ ಸುಟ್ಟುಹಾಕುವುದು. ಈ ನದಿಯ ಮಹಿಮೆಯನ್ನು ಯಾರು ತಾನೆ ಬಣ್ಣಿಸಲು ಶಕ್ಯರು ಎಂದು ಇದರ ಅರ್ಥ.
ಈ ನದಿಯಲ್ಲಿ ಭಕ್ತಿಯಿಂದ ಸ್ನಾನವನ್ನು ಮಾಡಿದರೆ ಅವರ ಪಾಪಗಳು ಸುಟ್ಟು ಹೋಗುತ್ತವೆ ಎಂದು ಇಲ್ಲಿನ ತಾತ್ಪರ್ಯ. ಇದು ಕೇವಲ ಉತ್ಪ್ರೇಕ್ಷೆ ಮಾಡಿ ಹೇಳಿರುವ ಮಾತೋ ಅಥವಾ ಪಾಪಗಳನ್ನು ಸುಡುತ್ತದೆ ಎಂದು ಪಾಪನಾಶಕ್ಕೆ ಒಂದು ಉಪಮಾನವೋ ಅಲ್ಲ. ಇದು ಅನುಭವದ ಮಾತೇ ಆಗಿದೆ. ಈ ನದಿಯಲ್ಲಿ ಸ್ನಾನವನ್ನು ಮಾಡಲೆಂದು ಮುಳುಗು ಹಾಕಿದಾಗ ಬೆಂಕಿಯು ಕಟ್ಟಿಗೆಯನ್ನು ಸುಡುವಾಗ ಚಟ ಚಟ ಎಂದು ಹೇಗೆ ಶಬ್ದ ಬರುವುದೋ ಆ ರೀತಿಯ ಶಬ್ದ ಕೇಳಿಬರುತ್ತದೆ. “ನಿನ್ನ ಪಾಪಗಳು ಸುಟ್ಟು ಹೋಗುತ್ತಿವೆ” ಎಂದು ಭಕ್ತನಿಗೆ ತಿಳಿಸಲೋಸುಗವೇ ನದಿಯು ಈ ಶಬ್ದವನ್ನು ಮಾಡುತ್ತಾ ಪಾಪಗಳನ್ನು ಸುಟ್ಟುಹಾಕುತ್ತದೆ ಎಂದು ಶ್ರೀವಾದಿರಾಜ ಪೂಜ್ಯಪಾದರು ತಿಳಿಸಿಕೊಡುತ್ತಾರೆ.
ಇದೊಂದು ಅಪೂರ್ವವಾದ ಅನುಭವವೇ ಸರಿ. ಶ್ರದ್ಧೆಯಿಂದ ಸ್ನಾನವನ್ನು ಮಾಡಿ ಈ ಅನುಭವವನ್ನು ಪಡೆದುಕೊಂಡಿರುವ ಸಾವಿರಾರು ಜನ ಭಕ್ತರಿದ್ದಾರೆ.
ಯಾವಾಗ ಸ್ನಾನವನ್ನು ಮಾಡಿದರೂ ಪುಣ್ಯವು ಸಿಕ್ಕೇ ಸಿಗುವುದು. ಆದರೆ ಕೃಷ್ಣಾಂಗಾರಕ ಚತುರ್ದಶಿಯ ಸ್ನಾನವು ಬಹಳ ವಿಶೇಷವೆನಿಸಿದೆ.
ಯಾವುದೇ ತಿಂಗಳಿನಲ್ಲಿ ಕೃಷ್ಣಪಕ್ಷ, ಮಂಗಳವಾರ ಹಾಗು ಚತುರ್ದಶೀ ತಿಥಿಗಳು ಒಟ್ಟಾಗಿ ಬಂದಿದ್ದರೆ ಅದನ್ನು ಕೃಷ್ಣಾಂಗಾರಕ ಚತುರ್ದಶೀ ಎನ್ನುತ್ತಾರೆ. ಜ್ಯೌತಿಷದಲ್ಲಿ ಇದೊಂದು ವಿಶೇಷವಾದ ದಿನ. ವರ್ಷಕ್ಕೆ ಒಮ್ಮೆಯೋ, ಅಥವಾ ಹಲವು ವರ್ಷಗಳಿಗೆ ಒಮ್ಮೆಯೋ ಈ ವಿಶೇಷವು ಸಂಭವಿಸುತ್ತದೆ. ಈ ದಿನದಲ್ಲಿ ಮಾಡಿದ ಸ್ನಾನ ತರ್ಪಣಾದಿಗಳಿಗೆ ವಿಶೇಷ ಫಲವುಂಟು.
ಈ ದಿನದಂದು ಸುವರ್ಣಾನದಿಯಲ್ಲಿ ಸ್ನಾನವನ್ನು ಮಾಡುವುದು ಬಹಳ ವಿಶೇಷ. ಈ ಸ್ನಾನಕ್ಕಾಗಿ ನೂರಾರು ಮಂದಿ ಭಕ್ತರು ಸುವರ್ಣಾ ನದಿಗೆ ಆಗಮಿಸಿ, ಸ್ನಾನ, ಜಪ, ತರ್ಪಣಗಳನ್ನು ಮಾಡಿ ಧನ್ಯತೆಯನ್ನು ಅನುಭವಿಸುತ್ತಾರೆ.







Leave a Reply