Mangaraya Temple – Adoni

ಈ ಪುಟ್ಟ ಹನುಮನಿಗೆ ಮಂಗರಾಯ ಎಂಬ ಒಂದು ಮುದ್ದಾದ ಹೆಸರು ಇದೆ. ಇವನಿರುವುದು ಆಂಧ್ರ-ಕರ್ಣಾಟಕದ ಗಡಿಭಾಗದ ಆದವಾನಿ ಪಟ್ಟಣದಲ್ಲಿ. ಈ ಆದವಾನಿಯ ಪ್ರಾಚೀನ ಹೆಸರು ಯಾದವಾದ್ರಿ ಎಂದು. ಈ ಊರು ಬಿರುಬಿಸಿಲಿಗೆ ಹೆಸರುವಾಸಿ. ಊರಹೊರಗೆ ರಣಮಂಡಲ ಎನ್ನುವ ಒಂದು ಬೆಟ್ಟವಿದೆ. ಶ್ರೀವ್ಯಾಸರಾಜ ಮಹಾಪ್ರಭುಗಳು ಆ ಬೆಟ್ಟದ ಮೇಲೆ ಮತ್ತು ಬೆಟ್ಟದ ಕೆಳಗೆ ಹೀಗೆ ಎರಡು ಕಡೆಗಳಲ್ಲಿಯೂ ಶ್ರೀಪ್ರಾಣದೇವರ ಪ್ರತಿಷ್ಠಾಪನೆಯನ್ನು ಮಾಡಿದ್ದಾರೆ. ಊರು ಭಯಂಕರ ಬಿಸಿಲತಾಣವಾಗಿದ್ದರೂ ಈ ಎರಡೂ ಪ್ರಾಣದೇವರ ಸನ್ನಿಧಿಗಳು ಮಾತ್ರ ವರ್ಷದ ಎಲ್ಲದಿನಗಳಲ್ಲಿ ತಂಪಿನಿಂದ ಕೂಡಿರುತ್ತವೆ.

ಈ ಮಂಗರಾಯನ ಸನ್ನಿಧಿಯು ಪ್ರಾಚೀನ ಕಾಲದಿಂದಲೂ ಶ್ರೀಹರಿದಾಸರಿಗೆ ಒಂದು ಸಾಧನಾಕ್ಷೇತ್ರವಾಗಿದೆ. ಶ್ರೀರಾಯರೂ ಸಹ ಇಲ್ಲಿ ಬಂದುಹೋಗುತ್ತಿದ್ದ ಆಲಯವಿದು. ಶ್ರೀವಿಜಯದಾಸರು ಬಹಳವರ್ಷಗಳ ಕಾಲ ಇಲ್ಲಿ ಸಾಧನೆಯನ್ನು ಮಾಡಿದ್ದಾರೆ. ಮಂತ್ರಾಲಯ, ಆದವಾನಿ, ಮಾನವಿಯ ಸುತ್ತಮುತ್ತಲಿನ ಎಲ್ಲ ಹರಿದಾಸರುಗಳಿಗೆ ಈ ಹನುಮನ ಮನೆಯೇ ಒಂದು ಶಾಲೆ. ಶ್ರೀವಿಜಯಪ್ರಭುಗಳೇ ಇವರೆಲ್ಲರ ಸ್ವರೂಪವನ್ನು ತಿಳಿಸಿಕೊಟ್ಟ ಉಪಾಧ್ಯಾಯರು.

ಗಾಯತ್ರೀಸಿದ್ಧರಾದ ಭಾಗಣ್ಣನು ಸಹ ಶ್ರೀವಿಜಯದಾಸರ ಶಿಷ್ಯರಾಗಿ ಶ್ರೀಹರಿದಾಸರಾಗಿದ್ದು ಸರಿಯಷ್ಟೇ. ಅವರಿಗೆ ಶ್ರೀವಿಜಯಪ್ರಭುಗಳು ಗೋಪಾಲವಿಠಲ ಎನ್ನುವ ಅಂಕಿತವನ್ನು ಪ್ರದಾನಮಾಡಿದ್ದು ಈ ಮಂಗರಾಯನ ಗುಡಿಯಲ್ಲಿಯೇ.

ಶ್ರೀವ್ಯಾಸರಾಜರು, ಶ್ರೀರಾಯರು, ಶ್ರೀವಿಜಯರಾಯರು, ಶ್ರೀಗೋಪಾಲದಾಸರು, ಶ್ರೀಪಂಗನಾಮದತಿಮ್ಮಣ್ಣದಾಸರು ಹೀಗೆ ಅನೇಕ ಮಹಿಮಾನ್ವಿತರಿಂದ ಪೂಜೆಗೊಂಡ ಶ್ರೀಪ್ರಾಣದೇವರು ಇವರು. ಇವರ ಕಾಲಡಿಯಲ್ಲಿ ಶ್ರೀರಾಘವೇಂದ್ರಪ್ರಭುಗಳು ಮೃತ್ತಿಕಾವೃಂದಾವನದ ರೂಪದಲ್ಲಿ ನೆಲೆಸಿದ್ದಾರೆ. ಇವರೆಲ್ಲರ ತಪಃಶಕ್ತಿಯು ಈ ಕ್ಷೇತ್ರದಲ್ಲಿ ಹೆಪ್ಪುಗಟ್ಟಿದೆ. ಹೀಗಾಗಿ ಇಲ್ಲಿ ಮಾಡಿದ ಸತ್ಕಾರ್ಯಗಳಿಗೆಲ್ಲ ಬಹುದೊಡ್ಡ ಫಲವಿದೆ. ಹನುಮನ ಅಂತರ್ಯಾಮಿ ಶ್ರೀರಾಮನಿಗೆ ಪರಮಪ್ರಿಯವಾದ ಕ್ಷೇತ್ರವಿದು. ಇಲ್ಲಿ ಸೇವೆ ಮಾಡಿದರೆ ನಮ್ಮ ಬೇಡಿಕೆಗಳೆಲ್ಲವೂ ತ್ವರಿತವಾಗಿ ಈಡೇರುತ್ತವೆ.

ಈ ಸನ್ನಿಧಿಯು ಮಂತ್ರಾಲಯದ ಶ್ರೀರಾಘವೇಂದ್ರಸ್ವಾಮಿಗಳವರ ಮಠದ ಆಡಳಿತಕ್ಕೆ ಒಳಪಟ್ಟಿದೆ. ಚಿಕ್ಕ ಧಾರ್ಮಿಕ ಕಾರ್ಯಕ್ರಮಗಳನ್ನು ಇಲ್ಲಿ ನೆರವೇರಿಸಲು ಬೇಕಾಗಿರುವ ಅನುಕೂಲಗಳು ಇಲ್ಲಿವೆ. ಹಸ್ತೋದಕ ಮತ್ತು ತೀರ್ಥಪ್ರಸಾದದ  ವ್ಯವಸ್ಥೆಯು ಕೂಡ ಇದೆ. ಇಲ್ಲಿಗೆ ಹೋಗಬೇಕು ಎನ್ನುವವರು ಮೊದಲೇ ದೂರವಾಣಿಯ ಮೂಲಕ ತಿಳಿಸಿ ಹೋಗಬೇಕು.

ಆದವಾನಿಗೆ ಆದೋನಿ ಎಂದು ಕರೆಯುತ್ತಾರೆ. ಮಂತ್ರಾಲಯದಿಂದ ಬೆಂಗಳೂರು-ಬಳ್ಳಾರಿಗೆ ಹೋಗುವ ದಾರಿಯಲ್ಲಿ ೫೦ ಕಿ.ಮೀ ದೂರದಲ್ಲಿದೆ. ಬಸ್ಸುಗಳ ಸಂಪರ್ಕ ಬೇಕಾದಷ್ಟಿದೆ. ಬೆಂಗಳೂರು, ಮುಂಬಯಿ, ಚೆನ್ನೈ ರೈಲುಗಳು ಆದೋನಿಯಲ್ಲಿ ನಿಲ್ಲುತ್ತವೆ.

ನಮ್ಮ ಸಂಸ್ಥೆಯಿಂದ ಈ ಕ್ಷೇತ್ರಕ್ಕೆ ಮಾಡಿದ ಯಾತ್ರೆಯ ಫೋಟೋಗಳನ್ನು ಇಲ್ಲಿ ನೋಡಬಹುದು. : https://vasudevayatra.in/jitamitra-teerthara-aradhana-yaatre-2019/

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!